ಹಾವೇರಿ : ಬಿಜೆಪಿಯ “ಜಯವಾಹಿನಿ” ರಾಜ್ಯದಲ್ಲಿ ಎಲ್ಲೇ ಹೋದರೂ ಜನರಿಂದ ಅಭೂತಪೂರ್ವ ಜನಬೆಂಬಲ ಸಿಗ್ತಿದೆ. ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಈ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇಂದು ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಪರ “ರೋಡ್ ಶೋ” ನಡೆಸಿ ಮಾತನಾಡಿದ ಸಿಎಂ, ಅರುಣ್ ಕುಮಾರ್ ಅವರನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ನವರು ಈಗ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡುವ ಹೊಸ ತಂತ್ರವಾಗಿದೆ. ಮೋಸ ಮಾಡುವ ಕಾಂಗ್ರೆಸ್ ಇದೀಗ ಮತ್ತೆ ಗ್ಯಾರಂಟಿ ಕಾರ್ಡ್ ಜೊತೆ ಬಂದಿದ್ದಾರೆ. ಕಾಂಗ್ರೆಸಿಗರ ಮೇಲೆ ಜನರಿಗೆ ವಿಶ್ವಾಸ ಇಲ್ಲ. ಅದು ಬೋಗಸ್ ಕಾರ್ಡ್. ಚುನಾವಣೆವರೆಗೂ ಮಾತ್ರ ಗ್ಯಾರಂಟಿ ಇರುತ್ತೆ. ಆಮೇಲೆ ಗಳಗಂಟಿ. ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದರೂ ಕಾಂಗ್ರೆಸ್ ಅವರು ಮಾಡಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡಲು ಮುಂದಾದಾಗ ಜೇನುಗೂಡಿಗೆ ಕೈ ಹಾಕಬೇಡಿ ಅಂದರು. ಆದರೆ ನಾನುಅವರ ಮಾತಿಗೆ ಕಿವಿಗೂಡಲಿಲ್ಲ, ನಾನು ಜೇನು ಕಡಿಸಿಕೊಂಡು ಜೇನು ತುಪ್ಪ ನೀಡಿದ್ದೇನೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿ ಎಲ್ಲ ಸಮುದಾಯಕ್ಕೆ ನ್ಯಾಯ ಕೊಡಿಸುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.