ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಶಕ್ತಿ ಯೋಜನೆಯ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಯೋಜನೆಯಿಂದ ಆಟೋ ಚಾಲಕರ ಜೀವನ ತೀರ ಸಂಕಷ್ಟಕ್ಕೆ ಈಡಾಗಿದ್ದು, ನಾಳೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಧರಣಿ ನಡೆಸಲು ನಿರ್ಧರಿಸಿದ್ದಾರೆ ಎಂದು ಆಟೋ ಚಾಲಕರ ಸಂಘ ತಿಳಿಸಿದೆ.
ನಾಳೆ (ಸೋಮವಾರ) ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಆಟೋ ಸಂಚಾರ ಬಂದ್ ಇರಲಿದೆ ಎಂದು ತಿಳಿದು ಬಂದಿದೆ. ನಗರದ ಚೆನ್ನಮ ವೃತ್ತದಲ್ಲಿ ಧರಣಿ ನಡೆಸಲಿರುವ ಆಟೋ ಚಾಲಕರು ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಯೋಜನೆ ವಿರೋಧಿಸಿ ನಾಳೆ ಆಟೋ ಚಾಲಕರ ಸಂಚಾರ ಬಂದಗೆ ಕರೆ ನೀಡಿದ್ದಾರೆ.
ಈಗಾಗಲೇ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇತ್ತೀಚಿಗೆ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮಾಲೀಕರ ಜೊತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಮಾಲೀಕರು ಗಡುವು ನೀಡಿದ್ದು, ಒಂದು ವೇಳೆ ಆ ಗಡುವಿನಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.