ಪಂಚಾಯತ್ ಅಧ್ಯಕ್ಷರ ಅವಧಿ 5 ವರ್ಷ? ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ
ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರ ಅಧಿಕಾರದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದ್ದು ಈ ಕುರಿತಂತೆ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವನೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಕೊಳ್ಳಲು ತಯಾರಿ ನಡೆದಿದೆ ಎನ್ನಲಾಗಿದೆ.
ಉದ್ದೇಶಿತ ಪ್ರಸ್ತಾವವನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಅಧಿಕಾರಿಗಳ ಸೋಮವಾರ ಕರೆದಿದ್ದಕ್ಕೆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರೂಪಿಸಿದಂತೆ ಪಂಚಾಯತ್ ಅಧ್ಯಕ್ಷರ ಅವಧಿಯನ್ನು ಪುನಃ 5 ವರ್ಷಕ್ಕೆ ನಿಗದಿಗೊಳಿಸಲು ಅಗತ್ಯ ತಿದ್ದುಪಡಿ ತರುವ ಪ್ರಸ್ತಾಪವನ್ನು ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ವಿಷಯವನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಂಡಿಸಿ ಶಾಸಕರ ಅಭಿಪ್ರಾಯ ಪಡೆದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಯೋಚಿಸುತ್ತಿದೆ.