ಕುಕನೂರು : ತಾಲೂಕಿನ ಸಣ್ಣ ಹಳ್ಳಿಯಾಗಿರುವ ಗೊರ್ಲೆಕೊಪ್ಪ ಗ್ರಾಮದ ಸೀಮೆಯಲ್ಲಿ ಹೊಸದಾಗಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಬಾರ್ ಲೈಸೆನ್ಸ್ ದಾರರ ವಿರುದ್ಧ ಗ್ರಾಮದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಾರ್ ಅಂಗಡಿ ತೆರೆಯುವುದನ್ನು ವಿರೋಧಿಸಿ ಸ್ಥಳೀಯ ಇಟಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಂಡಲಗೇರಿ ಗ್ರಾಮದಿಂದ ಗೊರ್ಲೆಕೊಪ್ಪ ಕಡೆಗೆ ಬರುವ ದಾರಿಯಲ್ಲಿ ಹೊಸದಾಗಿ ಬಾರ್ ಅಂಗಡಿಗೆ ಕುಕನೂರು ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ಲೈಸೆನ್ಸ್ ಪಡೆದಿದ್ದು ಗೊರ್ಲೆಕೊಪ್ಪದಂತಹ ಸಣ್ಣ ಹಳ್ಳಿಯ ಹತ್ತಿರ ಮದ್ಯದ ಅಂಗಡಿ ತೆರೆಯಲು ಪ್ರಯತ್ನ ನಡೆಸಿದ್ದಾರೆ. ಇದನ್ನು ಮನಗಂಡಿರುವ ಗ್ರಾಮದ ಮಹಿಳೆಯರು ಯಾವುದೇ ಕಾರಣಕ್ಕೆ ಗೊರ್ಲೆಕೊಪ್ಪ ಗ್ರಾಮದ ಸಿಮಾದಲ್ಲಿ ಬಾರ್ ಅಂಗಡಿ ತೆರೆಯಲು ಬಿಡುವುದಿಲ್ಲ, ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚಿನ ಹೋರಾಟ ಮಾಡುತ್ತೇವೆ ಎಂದು ಮಹಿಳೆಯರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳೆಯರಾದ ಪಾರಮ್ಮ ಪೊಲೀಸ್ ಪಾಟೀಲ್, ಶಶಿಕಲಾ ಬಿನ್ನಾಳ್, ರತ್ಮಮ್ಮ ಪಾಟೀಲ್, ಗಂಗಮ್ಮ ಜೂಲ್ಪಿ, ಡ್ರಾಕ್ಷಣಮ್ಮ ಗುನ್ನಳ್, ಜಯಮ್ಮ ಹಿರೇಮಠ ಸೇರಿದಂತೆ ಅನೇಕ ಮಹಿಳೆಯರು ಪಂಚಾಯತ್ ಅಧಿಕಾರಿಗಳಿಗೆ ಮದ್ಯದ ಅಂಗಡಿ ತೆರೆಯಲು ವಿರೋಧಿಸಿ ಮನವಿ ಸಲ್ಲಿಸಿದ್ದಾರೆ.