ಕುಕನೂರು : ಕಳೆದ ಒಂದು ವಾರದ ಹಿಂದೆ ತಾಲೂಕಿನ ಮಂಗಳೂರು ಹಾಗೂ ಕುದುರೆಮೋತಿ ಗ್ರಾಮಗಳಲ್ಲಿ ಪ್ರತೇಕ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಮಂಗಳೂರು ಗ್ರಾಮದ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು ಗ್ರಾಮಸ್ಥರು ಬೇವೂರು ಪೊಲೀಸ್ ಠಾಣೆಗೆ ದೂರಿದ್ದರು ಹಾಗೂ ಕುದರಿಮೋತಿ ಸೀಮಾದ ಮಹ್ಮದ್ ಸಾಬ ರವರ ಜಮೀನದಲ್ಲಿ, ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಪ್ರಾಕೇಜ್ ಕಾಮಗಾರಿಗೆ ಸಂಬಂಧಿಸಿದಂತೆ ಸಂಗ್ರಹಿಸಿದ ಕಂಟ್ರೋಲ್ ವಾಲ್ ಪೈಪುಗಳು ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಐದಾರು ದಿನಗಳ ಬಳಿಕ ಅಂತರ್ ಜಿಲ್ಲಾ ಕಳ್ಳರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 5 ಜನ ಕದೀಮರನ್ನು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 6.5 ಲಕ್ಷ ರೂಪಾಯಿಗಳ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿದು ಬಂದಿದೆ.
ಈ ಕುರಿತು ಬೇವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಭೇಧಿಸಲು ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ್ ಪಾಟೀಲ್ ಹಾಗೂ ಪ್ರಶಾಂತ ಪಿಎಸ್‌ಐ ಬೇವೂರ ಪೊಲೀಸ್ ಠಾಣೆ ಅವರ ನೇತೃತ್ವದ ವಿಶೇಷ ತಂಡ ರಚನೆ ಮಾಡಲಾಗಿತ್ತು, ಈ ತಂಡದ ಕಾರ್ಯಚರಣೆಯಿಂದ ಇಂದು 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ 1. ದೇವಪ್ಪ ತಂದೆ ಭೀಮಪ್ಪ ಭಜಂತ್ರಿ (32 ವರ್ಷ), 2. ಯಮನೂರಪ್ಪ ತಂದೆ ಹನಮಂತಪ್ಪ ಭಜಂತ್ರಿ (27ವರ್ಷ), 3. ಸುರೇಶ ಭಜಂತ್ರಿ (30 ವರ್ಷ), 4. ತಾಯಪ್ಪ ತಂದೆ ಸಣ್ಣ, ತಾಯಪ್ಪ ಭಜಂತ್ರಿ (21 ವರ್ಷ), 5. ಜಗದೀಶ ತಂದೆ ಫಕೀರಪ್ಪ ಕೊರವರ (22 ವರ್ಷ) ಬಂಧಿತರಾಗಿದ್ದಾರೆ. ಇವರಿಂದ 3.50 ಲಕ್ಷ ರೂ.ಗಳ ನಗದು ಹಣ ಕೃತ್ಯಕ್ಕೆ ಬಳಸಿದ ಆಶೋಕ ಜೈಲಾಂಡ್ ಕಂಪನಿಯ ವಾಹನ ನಂ: KA-37/A-9297, 3 ಲಕ್ಷ ರೂ. ಹಾಗೂ 3 ಮೊಬೈಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಈ ವೇಳೆ ಎಸ್‌ಪಿ ಶ್ರೀಮತಿ ಯಶೋದಾ ವಂಟಗೋಡಿ ಐ.ಪಿ.ಎಸ್ ಹಾಗೂ ಶರಣಬಸಪ್ಪ ಹೆಚ್. ಸುಬೇದಾರ ಡಿ.ಎಸ್.ಪಿ ಕೊಪ್ಪಳ ರವರು ಶ್ಲಾಘಿಸಿ ಸೂಕ್ತ, ಬಹುಮಾನ ಘೋಷಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.