ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ರೈತರಾದ ಬಸನಗೌಡ ಅಗಸಿಮುಂದಿನ ಎಂಬುವರಿಗೆ ಸೇರಿದ ಏಳು ಟ್ರಾಕ್ಟರ್ ಮೇವು ಮತ್ತು ಹೊಟ್ಟಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ಅಗ್ನಿಶಾಮಕ ಠಾಣೆಗೆ ತಿಳಿಸಿದ್ದರೂ ಸಹಿತ, ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವ ವೇಳೆಗೆ ಮೇವಿನ ಬಣವೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರಿಗೆ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಸಂಕಷ್ಟದಲ್ಲಿರುವ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಇನ್ನೂ ಈ ಬಗ್ಗೆ ಮಂಗಳವಾರ(ಏಪ್ರಿಲ್ 04) ಬೆಳಗ್ಗೆ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ, ರೈತರಿಗಾದ ನಷ್ಟದ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.