ಬೆಂಗಳೂರು : ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಮುಂದಿನ ತಿಂಗಳು ಮೇ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಮಾಹಿತಿ ಇದೆ. ರಾಜ್ಯಾದ್ಯಂತ ಒಟ್ಟು 236 ಮೌಲ್ಯಮಾಪನ ಕೇಂದ್ರಗಳಲ್ಲಿ SSLC ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಮಾರ್ಚ್ 31 ರಿಂದ ಆರಂಭವಾಗಿದ್ದ SSLC ಪರೀಕ್ಷೆಗಳು ಇದೇ ಏಪ್ರಿಲ್ 15ಕ್ಕೆ ಮುಕ್ತಾಯಗೊಂಡಿದ್ದವು. SSLC ಪರೀಕ್ಷೆಯನ್ನು ಬರೊಬ್ಬರಿ 8.6 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಅಂದಾಜು 45 ಲಕ್ಷ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಿದೆ. ಹಾಗಾಗಿ ಮೌಲ್ಯಮಾಪನ ಕಾರ್ಯವನ್ನು ಮುಂಬರುವ 10 ರಿಂದ 11 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಇದರ ಫಲಿತಾಂಶವು ಮೇ ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಎಸ್ಎಸ್ ಎಲ್ ಸಿ ಮೌಲ್ಯಮಾಪನಕ್ಕೆ ರಾಜ್ಯದ ಬರೊಬ್ಬರಿ 62 ಸಾವಿರ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಬಹುತೇಕ ಮೌಲ್ಯಮಾಪಕರು ಮೊದಲ ದಿನ ಹಾಜರಾಗಿದ್ದು, ಕೆಲವರಷ್ಟೇ ಗೈರಾಗಿದ್ದರು ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.