ಪ್ರಜಾ ವೀಕ್ಷಣೆ ವಿಶೇಷ ಸುದ್ದಿ
ವರದಿ : ಶರಣಯ್ಯ ತೋಂಟದಾರ್ಯಮಠ
ಕುಕನೂರು : ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಳ್ಳುಲು ಸರ್ಕಾರ ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದು ತಿದ್ದುಪಡಿಗಾಗಿ ಪಟ್ಟಣದ ಜನತೆ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಸರ್ಕಾರ ಮೂರು ದಿನಗಳ ಅವಕಾಶವನ್ನು ನೀಡಿದೆ.
ಅದು ಕೇವಲ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್, ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಮಾತ್ರ ಈ ಪಡಿತರ ತಿದ್ದುಪಡಿ ಮಾಡಲು ಅವಕಾಶವನ್ನು ನೀಡಿದೆ. ಈ ಹಿನ್ನಲೇಯಲ್ಲಿ ಗ್ರಾಮೀಣ ಭಾಗದ ಜನರು ಗ್ರಾಮ ಒನ್‌ಗಳಲ್ಲಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಪಡಿತರ ತಿದ್ದುಪಡಿಗೆ ಕಾಯಬೇಕಿದೆ. ಇನ್ನು ಕೆಲವು ಪಟ್ಟಣ ಪಂಚಾಯತಿಯAತಹ ನಗರದಲ್ಲಿ ಕರ್ನಾಟಕ ಒನ್ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಅವರು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ.
ಆದರೆ ಕುಕನೂರು ಪಟ್ಟಣದ ಜನತೆಗೆ ಮಾತ್ರ ಇದು ಮಾರಕವಾಗಿದೆ. ಕುಕನೂರು ಪಟ್ಟಣವು ತಾಲೂಕ ಕೇಂದ್ರ ಹಾಗೂ ಪಟ್ಟಣ ಪಂಚಾಯತಿಯಾಗಿದ್ದರು ಸಹಿತಿ ಇಲ್ಲಿ ಕರ್ನಾಟಕ ಒನ್ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಪಟ್ಟಣದ ಜನತೆ ಪಡಿತರ ತಿದ್ದುಪಡಿಗಾಗಿ ಪಕ್ಕದ ಗ್ರಾಮಗಳ ಗ್ರಾಮ ಒನ್ ಗಳ ಮುಂದೆ ಮಹಿಳೆಯರು ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗಿ ಗಂಟೆ ಗಟ್ಟಲೇ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಸುಮಾರು 20,000ಕ್ಕೂ ಹೆಚ್ಚು ಜನಸಂಖ್ಯೆ ಇದ್ದರು ಸಹಿತಿ ಇದುವರೆಗೂ ಕರ್ನಾಟಕ ಒನ್ ಕೇಂದ್ರವನ್ನು ಪ್ರಾರಂಭ ಮಾಡಿಲ್ಲ, ಇದರಿಂದ ಪಟ್ಟಣದ ಜನತೆ ಸಾಕಷ್ಟು ಸೌಲಭ್ಯಗಳನ್ನು ಕಳೆದುಕೊಳುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ
ಪಟ್ಟಣವು ತಾಲೂಕ ಕೇಂದ್ರವಾಗಿ ಸುಮಾರು ೬ವರ್ಷಗಳು ಕಳೆದರೂ ಸಹಿತ ತಾಲೂಕ ಆಡಳಿತದಲ್ಲಿ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಯೊಂದಕ್ಕೂ ಹಾರಿಕೆ ಉತ್ತರವನ್ನು ನೀಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಕುಕನೂರು ತಹಶೀಲ್ದಾರ್ ಹೆಚ್ ಪ್ರಾಣೇಶ್‌ರನ್ನು ಸಂಪರ್ಕಿಸಿದಾಗ ಅವರು “ ನಮ್ಮ ತಾಲೂಕ ಕೇಂದ್ರಕ್ಕೆ ಇನ್ನೂ ಆಹಾರ ಇಲಾಖೆಯನ್ನು ನೀಡಿಲ್ಲ, ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾ ಆಹಾರ ನೀರಿಕ್ಷಕರನ್ನು ಸಂಪರ್ಕಿಸಬೇಕು” ಎಂದು ಹೇಳಿ ಸುಮ್ಮನಾದರು.