ಕೊಪ್ಪಳ : ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರನ್ನೇ ಮುಂದುವರೆಸಲು ಜಿಲ್ಲೆಯ ಹಿರಿಯ ಶಾಸಕರು ನಡೆಸಿದ ಲಾಭಿಗೆ ಮುಖ್ಯಮಂತ್ರಿ ಅವರು ಒಪ್ಪಿಲ್ಲ. ರಾಜ್ಯ ಸರಕಾರದ ಆದೇಶದಂತೆ ಡಾ. ರಾಮ್ ಅರಸಿದ್ದಿ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯ ಸರಕಾರ ಕಳೆದ ಜುಲೈ 4 ರಂದು ರಾಜ್ಯಾದ್ಯಂತ ವಿವಿಧ ಐಪಿಎಸ್-ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಈ ಪಟ್ಟಿಯಲ್ಲಿ ಕೊಪ್ಪಳ ಎಸ್ಪಿ ಯಶೋಧ ವಂಟಿಗೋಡಿ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ, ಈ ಸ್ಥಾನಕ್ಕೆ ಐಪಿಎಸ್ ಡಾ.ರಾಮ್ ಅರಸಿದ್ದಿ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಡಾ.ರಾಮ್ ಅವರು ಅಧಿಕಾರ ವಹಿಸಿಕೊಳ್ಳಲು ಕೊಪ್ಪಳಕ್ಕೆ ಬಂದಿದ್ದರು. ನೂತನ ಎಸ್ಪಿ ಕಚೇರಿ ಒಳಗೆ ಹೋಗುವಷ್ಟರಲ್ಲೇ ಹಿರಿಯ ಅಧಿಕಾರಿಗಳು ಕರೆ ಮಾಡಿ, ಅಧಿಕಾರ ವಹಿಸಿಕೊಳ್ಳದಂತೆ ಮೌಕಿಕವಾಗಿ ಆದೇಶಿಸಿದ್ದರು ಎನ್ನಲಾಗಿದೆ.
ಜಿಲ್ಲೆಯ ಹಿರಿಯ ಯಲಬುರ್ಗಾ ಶಾಸಕ ಹಾಗೂ ಸಿಎಂ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯಶೋಧ ವಂಟಗೋಡಿ ಅವರನ್ನೇ ಮುಂದುವರೆಸಲು ಲಾಭಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ವರ್ಗಾವಣೆ ಆದೇಶ ತಡೆ ಹಿಡಿಯಬಹುದು ಎಂಬ ಚರ್ಚೆಗಳು ಪೊಲೀಸ್ ಮತ್ತು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಅವರು, ಸಿಎಂ ಕಚೇರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೆ ತರದೇ, ಅಧಿಕಾರಿಗಳ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ತಡೆದಿದ್ದಾರೆ.
ಈ ಘಟನೆಯೂ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಜುಗರ ಉಂಟು ಮಾಡಿತ್ತು. ಈ ಬಗ್ಗೆ ಸಿಎಂ ಅಂಗಳಕ್ಕೂ ಹೋಗಿ, ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು, ರಾಯರೆಡ್ಡಿ ಅವರ ಲಾಭಿಗೆ ಸೊಪ್ಪು ಹಾಕಿಲ್ಲ ಎಂಬ ಉನ್ನತ ಮೂಲಗಳಿಂದ ಮಾಹಿತಿ ಇದೆ. ಒಂದೊಮ್ಮೆ ಮುಂದುವರೆಸುವ ಇರಾದೆ ಇದ್ದರೆ ಆದೇಶಕ್ಕೂ ಮೊದಲೇ ಈ ಪ್ರಯತ್ನ ಮಾಡಬೇಕಿತ್ತು. ಸರಕಾರ ಆದೇಶ ಮಾಡಿ, ವಾಪಾಸ್ ಪಡೆದರೆ ವಿರೋಧ ಪಕ್ಷಗಳಿಗೆ ಆಹಾರ ಆಗುವ ಸಾಧ್ಯತೆ ಇದೆ ಎಂಬ ವಾದ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಶಾಸಕರಿಗೆ ನೀರಾಸೆ ಆಗಿದೆ ಎಂದು ತಿಳಿದು ಬಂದಿದೆ.
“ಜನರನ್ನು ಗ್ಯಾರಂಟಿ ಗುಂಗಿನಲ್ಲಿ ಮುಳುಗಿಸಿರುವ ರಾಜ್ಯ ಸರಕಾರ, ಅಧಿಕಾರಿಗಳ ವರ್ಗಾವಣೆಯನ್ನು ದಂಧೆ ಮಾಡಿಕೊಂಡಿದೆ. ಒಂದ್ದೊಂದು ಹುದ್ದೆಗೆ ಒಂದು ದರ ನಿಗದಿ ಮಾಡಿದ್ದಾರೆ ಎಂದು ಬಿಜೆಪಿ ಈ ಮೊದಲೇ ಆರೋಪಿಸಿತ್ತು. ಈಗ ಸ್ವತಃ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ವರ್ಗಾವಣೆ ದಂಧೆ ಆಗಿದೆ ಎಂದು ಹೇಳಿ ನಮ್ಮ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಕೊಪ್ಪಳ ಎಸ್ಪಿ ಹುದ್ದೆಗೆ ರಾಜ್ಯ ಸರಕಾರ ಎಷ್ಟು ದರ ಫಿಕ್ಸ್ ಮಾಡಿದೆ ಎಂಬುದನ್ನೂ ರಾಯರೆಡ್ಡಿ ಅವರು ಬಹಿರಂಗಪಡಿಸಲಿ. ಬಹುಶಃ ತಮಗೆ ಪಾಲು ಸಿಗದಿದ್ದರಿಂದ ರಾಯರೆಡ್ಡಿ ಅವರು ಈ ದಂಧೆಯನ್ನು ಬಹಿರಂಗ ಮಾಡಿರಬಹುದು ಎಂಬ ಅನುಮಾನ ಇದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು”