ಜನಸಂಖ್ಯಾ ಸ್ಫೋಟ ನಿಯಂತ್ರಣದ ಜಾಗೃತಿ ಮೂಡಿಸುವ  ಕಾರ್ಯವಾಗಲಿ: ಜಿಪಂ ಸಿಇಓ ಮೊಹಮ್ಮದ್ ಅಲಿ ಅಕ್ರಂ ಶಾ

You are currently viewing ಜನಸಂಖ್ಯಾ ಸ್ಫೋಟ ನಿಯಂತ್ರಣದ ಜಾಗೃತಿ ಮೂಡಿಸುವ  ಕಾರ್ಯವಾಗಲಿ: ಜಿಪಂ ಸಿಇಓ ಮೊಹಮ್ಮದ್ ಅಲಿ ಅಕ್ರಂ ಶಾ

ಹೊಸಪೇಟೆ (ವಿಜಯನಗರ) : ಜನಸಂಖ್ಯೆಯನ್ನು ನಿಯಂತ್ರಣ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ನಿಯಂತ್ರಿಸಲು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಟಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜುಲೈ 26 ರಂದು ತಾಲೂಕು ಪಂಚಾಯತ್ ವಿದ್ಯಾರಣ್ಯ ಸಭಾಂಗಣದಲ್ಲಿ ಸಸಿಗೆ ನೀರುಣಿಸುವ ಮೂಲಕ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದ ಜನಸಂಖ್ಯೆಯಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. ಮೂಢನಂಬಿಕೆ, ಅಜ್ಞಾನ, ಅನಕ್ಷರತೆ, ಬಡತನ, ಮಾಹಿತಿ ಕೊರತೆದಿಂದ ಜನಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ. ಜನಸಂಖ್ಯೆ ಸ್ಪೋಟದಿಂದ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಮಾಜದ ಅಸಮಾನತೆ, ನಿರುದ್ಯೋಗ ಸಮಸ್ಯೆ ಉಂಟಾಗುತ್ತವೆ. ಜನರು ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಹೊಸಪೇಟೆಯ ಅಧ್ಯಕ್ಷರಾದ ಎಚ್.ಎನ್.ಮಹಮದ್ ಇಮಾಮ್ ನಿಯಾಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣಿರಲಿ-ಗಂಡಿರಲಿ ಒಂದು ಕುಟುಂಬಕ್ಕೆ ಎರಡೇ ಮಕ್ಕಳಿರಲಿ ಎನ್ನುವಂತಹ ಆರೋಗ್ಯಕರ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು. ಉತ್ತಮವಾದ ಕುಟುಂಬ ಯೋಜನೆಯಿಂದ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯ್ಕ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿ ಕುಂಟಿತಗೊಳ್ಳುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದ ಘೋಷವಾಕ್ಯವು “ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ” ಎಂಬುದಾಗಿದೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 03 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ನೂತನ ವಿಧಾನಗಳಾದ ಅಂತರ ಚುಚ್ಚುಮದ್ದು, ಛಾಯಾ ನುಂಗುವ ಮಾತ್ರೆ, ಮಾಲಾ-ಎನ್ ಮಾತ್ರೆ ಹಾಗೂ ಪಿ.ಪಿ.ಐ.ಯು.ಸಿ.ಡಿ (ವಂಕಿದಾರಣೆ) ಇವುಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಅರ್ಹ ದಂಪತಿಯು ಅವುಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬವನ್ನು ಸುಖಿ ಕುಟುಂಬವನ್ನಾಗಿ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಎರಡು ಹಂತಗಳಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಅಭಿಯಾನದಲ್ಲಿ ಭಾಗಿಯಾಗಬೇಕು. ಸರಿಯಾದ ಸಮಯದಲ್ಲಿ ಗರ್ಭಧಾರಣೆ ಹಾಗೂ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಗೊಳಿಸುವುದು, ಜನಸಂಖ್ಯೆ ನಿಯಂತ್ರಣದ ಜೊತೆಗೆ ಲಿಂಗಾನುಪಾತ ವ್ಯತ್ಯಾಸವಾಗದಂತೆ ಜಾಗೃತಿ ವಹಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಕುಟುಂಬ ಕಲ್ಯಾಣ ಯೋಜನೆಯಡಿ ಸಾಧನೆ ಮಾಡಿದ ಸಾಧಕರಾದ, ಜಿ.ಹೆಚ್.ಕೂಡ್ಲಿಗಿಯ ಡಾ.ನಾಗರಾಜ, ಸಿಹೆಚ್‌ಸಿ ಹಡಗಲಿ ತಾಲೂಕಿನ ಡಾ.ರಾಜೇಶ್ ನಾಯ್ಕ್, ಜಿ.ಹೆಚ್.ಹಡಗಲಿಯ ಡಾ.ಶಿವಕುಮಾರ್, ಹೆಚ್.ಬಿ.ಹಳ್ಳಿಯ ಡಾ.ಶಿವರಾಜ, ಹೊಸಪೇಟೆಯ ಡಾ.ಗುರುಪ್ರಸಾದ್, ಜಿ.ಹೆಚ್.ಕೂಡ್ಲಿಗಿಯ ಗಂಗಮ್ಮ, ಎಮ್‌ಸಿಹೆಚ್ ಹೊಸಪೇಟೆಯ ಉಮಾ ಮಹೇಶ್ವರಿ ಅವರಿಗೆ ಶಾಲುಹೊದಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕರಾದ ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವಿನಯ್, ಜಿಲ್ಲಾ ಕ್ಷಯರೊಗ ನಿರ್ಮೂಲಣಾಧಿಕಾರಿ ಡಾ.ಜಗದೀಶ್ ಪಾಟ್ನಿ, ವೈದ್ಯಾಧಿಕಾರಿ ಡಾ.ಭರಮನಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಅಫೀಜ್ ಖಾನ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮತ್ತು ಮಲ್ಲಿಗೆ ಕಾಲೇಜಿನ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Leave a Reply

error: Content is protected !!