ಕುಕನೂರು : 78 ನೇ ಸ್ವಾತಂತ್ರ್ಯ ಮಹೋತ್ಸವ ನಿಮಿತ್ತ ಯಲಬುರ್ಗಾ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ಹರ್ ಘರ್ ತಿರಂಗಾ ಅಭಿಯಾನದಡಿ ಕುಕನೂರು ಪಟ್ಟಣದಲ್ಲಿ ಬೈಕ್ ರಾಲಿ ಮಾಡಲಾಯಿತು.
ಮಸಬ ಹಂಚಿನಾಳದ ಬಿಜೆಪಿ ಕಾರ್ಯಾಲಯದಿಂದ ಕುಕನೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಬೈಕ್ ರಾಲಿ ಮಾಡುವ ಮೂಲಕ ಮನೆ ಮನೆ ಮೇಲೆ ತ್ರಿವರ್ಣ ದ್ವಜ ಹಾರಿಸೋಣ ಭಾರತ ಮಾತೆಗೆ ನಮಿಸೋಣ ಎಂದು ಅಭಿಯಾನ ಮಾಡಿದರು.
ಬೈಕ್ ರಾಲಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗವರಾಳ್, ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಕಲ್ಲಪ್ಪ ಕರಮುಡಿ, ಪಟ್ಟಣ ಪಂಚಾಯತ್ ಸದಸ್ಯರು, ಇತರ ಪದಾಧಿಕಾರಿಗಳು ಸುಮಾರು 50 ರಿಂದ 60 ಬೈಕ್ ಗಳೊಂದಿಗೆ ರಾಲಿಯಲ್ಲಿ ಭಾಗವಹಿಸಿ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮ ಮಾಡಿದರು.
ರಾಲಿ ಮುಗಿದ ಮೇಲೆ ವೀರಭದ್ರಪ್ಪ ಸರ್ಕಲ್ ನಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮೌನೇಶ್ ದಡೇಸಗೂರು ಭಾಗವಹಿಸಿ ಹರ್ ಘರ್ ತಿರಂಗಾ ಅಭಿಯಾನವು ಮನೆ ಮನೆಯಲ್ಲೂ ರಾಷ್ಟ್ರೀಯ ಬಾವುಟ ಹಾರಿಸಬೇಕು, ಈ ಮೂಲಕ ದೇಶ ಭಕ್ತಿ, ದೇಶ ಪ್ರೇಮ ಮೂಡಿಸಲು ಜಾಗೃತಿಗಾಗಿ ಈ ಅಭಿಯಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಹೆಲ್ಮೆಟ್ ಧರಿಸದ ಕಾರ್ಯಕರ್ತರು, ಸಾರ್ವಜನಿಕರ ಪ್ರಶ್ನೆ :
ರಾಲಿಯಲ್ಲಿ ಭಾಗವಹಿಸಿದ ಸುಮಾರು 50 -60 ಬೈಕ್ ಸವಾರರು ಹೆಲ್ಮೆಟ್ ಧರಿಸದೇ ರೋಡ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಮಾತ್ರವಲ್ಲ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಇದ್ದಂತಹ ಸಾರ್ವಜನಿಕರು ಜನಸಾಮಾನ್ಯರಿಗೆ ಒಂದು ನ್ಯಾಯ, ಬಿಜೆಪಿ ಕಾರ್ಯಕರ್ತರಿಗೆ ಒಂದು ನ್ಯಾಯವೇ? ಎಂದು ತಮ್ಮ ತಮ್ಮಲ್ಲಿಯೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು. ಕನಿಷ್ಠ
ಸಂಚಾರ ನಿಯಮ ಪಾಲಿಸದ ಕಾರ್ಯಕರ್ತರಿಗೆ ಹೆಲ್ಮೆಟ್ ನಿಂದ ವಿನಾಯತಿ ನೀಡಲಾಗಿದೆಯೇ? ಸಾರಿಗೆ ನಿಯಮ ಇವರಿಗೆ ಅನ್ವಯ ಆಗುವುದಿಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದರು.
ಕೊಪ್ಪಳ ಜಿಲ್ಲೆಯಾದ್ಯಂತ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಮಾಷಾಚರಣೆ ನಡೆಯುತ್ತಿದೆ. ಈ ಕುರಿತಂತೆ ಜಿಲ್ಲಾ ವರಿಷ್ಟಧಿಕಾರಿ ರಾಮ್ ಎಲ್ ಅರಸಿದ್ಧಿ ಅವರು ಈ ತಿಂಗಳು ಪೂರ್ತಿ ವಿಶೇಷ ಶಿರಸ್ತ್ರಾಣ ರಕ್ಷಾ ಕವಚ ಅಭಿಯಾನ ( ಹೆಲ್ಮೆಟ್ ಜಾಗೃತಿ ಅಭಿಯಾನ ) ಹಾಕಿಕೊಂಡಿದ್ದು ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರರು ರಸ್ತೆ ನಿಯಮ ಪಾಲಿಸುವಂತೆ ಪೊಲೀಸ್ ಇಲಾಖೆಯಿಂದ
ಜನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ. ಇದನ್ನು ಅಣಕಿಸುವಂತೆ ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿ ಮಾಡಿದ್ದು ಸಾರ್ವಜನಿಕರು ಪ್ರಶ್ನೆ ಮಾಡುವಂತಿತ್ತು.