ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ : ಕಾಂಗ್ರೆಸ್ ಮಡಿಲಿಗೆ ಕುಕನೂರು ಪಟ್ಟಣ ಪಂಚಾಯತ್ ಗದ್ದುಗೆ
ಕುಕನೂರು : ಬಹುನಿರೀಕ್ಷಿತ ಕುಕನೂರು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಇಂದು ಸೋಮವಾರ ಚುನಾವಣೆ ಅಧಿಕಾರಿ,ತಹಸೀಲ್ದಾರ್ ಎಚ್ ಪ್ರಾಣೇಶ್ ಅವರ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 8 ನೇ ವಾರ್ಡ್ ನ ಸದಸ್ಯೆ ಲಲಿತಮ್ಮ ಯಡಿಯಾಪುರ ಮತ್ತು ಉಪಾಧ್ಯಕ್ಷರಾಗಿ 3 ನೇ ವಾರ್ಡ್ ನ ಪ್ರಶಾಂತ್ ಅರುಬೆರಳಿನ ಅವರು ಅವಿರೋದವಾಗಿ ಆಯ್ಕೆಯಾದರು.
19 ಸದಸ್ಯ ಬಲದ ಕುಕನೂರು ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದ 10 ಸದಸ್ಯರು ಬಿಜೆಪಿ ಪಕ್ಷದಿಂದ 9 ಸದಸ್ಯರು ಇದ್ದಾರೆ. ಹೀಗಾಗಿ ಸುಲಭವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಗಾದಿ ಕಾಂಗ್ರೆಸ್ ಪಕ್ಷದ ಪಾಲಾಯಿತು.
ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಯರಡ್ಡಿ ಅವರಿಂದ ಅಭಿನಂದನೆ
ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಮತ ಚಲಾವಣೆ ಹಕ್ಕುಹೊಂದಿರುವ ಶಾಸಕ ಬಸವರಾಜ್ ರಾಯರಡ್ಡಿ, ಸಂಸದ ರಾಜಶೇಖರ್ ಹಿಟ್ನಾಳ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ
ಅಗತ್ಯ ಸಂಖ್ಯಾ ಬಲ ಇಲ್ಲದಿದ್ದರೂ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಪಕ್ಷದ ಲಕ್ಷ್ಮೀ ಸಬರದ್, ಉಪಾಧ್ಯಕ್ಷ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ್ದ ನೇತ್ರಾವತಿ ಮಾಲಗತ್ತಿ ತಮ್ಮ ನಾಮಪತ್ರ ವಾಪಾಸ್ ಪಡೆದುಕೊಂಡರು, ತೀವ್ರ ಪೈಪೋಟಿ ಏರ್ಪಡುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಅವಿರೋದವಾಗಿ ಆಯ್ಕೆ ಮಾಡಲಾಯಿತು.