ಕುಕನೂರು : ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ ಹಾಗೂ ಕಚೇರಿ, ಗಣಿ ಉದ್ಯಮದ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಶಾಸಕ ಭರತ್ ರೆಡ್ಡಿ ಅವರ ತಂದೆ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮತ್ತು ಸಂಬಂಧಿಗಳ ಮನೆಗಳು, ಕಚೇರಿಗಳಲ್ಲೂ ಶೋಧ ನಡೆಯುತ್ತಿದೆ. ಬೆಂಗಳೂರು, ಚೆನ್ನೈನಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆದಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬಳ್ಳಾರಿ ಶಾಸಕ ರೆಡ್ಡಿ ಅವರ ಕುಟುಂಬ ಗ್ರಾನೈಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಎಸ್ ಆರ್ ಇ ಗ್ರಾನೈಟ್ ಕ್ವಾರಿ ಭರತ್ ರೆಡ್ಡಿ ಒಡೆತನದ ಕಲ್ಲು ಗಣಿಗಾರಿಕೆ ಕಚೇರಿಯಲ್ಲಿ ಇ ಡಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಎರಡು ಗಂಟೆಯಿಂದಲೂ ದಾಖಲೆ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಎಂದು ತಿಳಿದು ಬಂದಿದೆ.
ಇ.ಡಿ ಅಧಿಕಾರಿಗಳ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದೆ ಎಂದು ಮಾಹಿತಿ ಇದೆ.