ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಮಾನವ ಸರಪಳಿ ರಚನೆಗೆ ವಿಜಯನಗರ ಜಿಲ್ಲೆಯಲ್ಲಿ ರೂಟ್‌ಮ್ಯಾಪ್ ಅಂತಿಮ
ಹೊಸಪೇಟೆ (ವಿಜಯನಗರ) : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 15 ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ರೂಟ್ ಮ್ಯಾಪನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಅಂದು ವಿಜಯನಗರ ಜಿಲ್ಲೆಯಲ್ಲಿ ಸುಮಾರು 38 ಕಿಲೋ ಮೀಟರ್‌ವರೆಗೆ ಮಾನವ ಸರಪಳಿ ನಿರ್ಮಿಸಲು ಅವಕಾಶವಿರುತ್ತದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿ.ಬಿ. ಡ್ಯಾಮ್ ಮೊದಲನೇ ಸೇತುವೆಯಿಂದ ಗಣೇಶ ದೇವಸ್ಥಾನದವರೆಗೆ 1 ಕಿ.ಮೀ., ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಸರ್ಕಲ್‌ದವರೆಗೆ 3 ಕಿ.ಮೀ, ಸಾಯಿಬಾಬಾ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗೆ 2 ಕಿ.ಮೀ, ಬಸವೇಶ್ವರ ಸರ್ಕಲ್‌ದಿಂದ ಅಪ್ಪು ಸರ್ಕಲ್‌ವರೆಗೆ 2 ಕಿ.ಮೀ., ಅಪ್ಪು ಸರ್ಕಲ್‌ನಿಂದ ಬಳ್ಳಾರಿ ರೋಡ್ ಸರ್ಕಲ್ ವರೆಗೆ 1.5 ಕಿ.ಮೀ., ಬಳ್ಳಾರಿ ರೋಡ್ ಸರ್ಕಲ್‌ದಿಂದ ಕಾರಿಗನೂರು ವರೆಗೆ 4 ಕಿ.ಮೀ., ಕಾರಿಗನೂರಿದಿಂದ ವಡ್ಡರಹಳ್ಳಿವರೆಗೆ 5 ಕಿ.ಮೀ., ವಡ್ಡರಹಳ್ಳಿದಿಂದ ಪಿ.ಕೆ.ಹಳ್ಳಿವರೆಗೆ 3 ಕಿ.ಮೀ, ಪಿ.ಕೆ.ಹಳ್ಳಿಯಿಂದ ಬಯಲುವದ್ದಿಗೆರಿವರೆಗೆ 4 ಕಿ.ಮೀ., ಬಯಲುವದ್ದಿಗೇರಿಯಿಂದ ಧರ್ಮಸಾಗರ ವರೆಗೆ 5 ಕಿ.ಮೀ., ಧರ್ಮಸಾಗರದಿಂದ ಗಾದಿಗನೂರುವರೆಗೆ 4 ಕಿ.ಮೀ., ಅಂತಿಮವಾಗಿ ಗಾದಿಗನೂರು ದಿಂದ ಭುವನಹಳ್ಳಿ ಗ್ರಾಮದವರೆಗೆ 3 ಕಿ.ಮೀ ಸೇರಿ ಒಟ್ಟು 38 ಕಿಲೋ ಮೀಟರ್ ಮಾನವ ಸರಪಳಿಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಚಿಸಲಾಗುವುದು.
ವಿಜಯನಗರ ಜಿಲ್ಲೆಯಲ್ಲಿ ಮಾನವ ಸರಪಳಿ ರಚಿಸಲು ಮಾರ್ಗದುದ್ದಕ್ಕೂ ಕಿಲೋ ಮೀಟರ್‌ವಾರು ಕ್ರಮಸಂಖ್ಯೆ ಗುರುತನ್ನು ನೀಡಲಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾನವ ಸರಪಳಿಯನ್ನು ರಚಿಸುವ ಪ್ರಮುಖ ಜವಾಬ್ದಾರಿ ಇರುತ್ತದೆ. ಸಂಬAಧಿಸಿದ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಅಥವಾ ಪ್ರಾಚಾರ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಂದು ಕಿ.ಮೀವಾರು ನಿಗದಿಪಡಿಸಿದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದು ಮಾನವ ಸರಪಳಿಯಲ್ಲಿ ಕಡ್ಡಾಯವಾಗಿ ಭಾಗಿಯಾಗುವಂತೆ ಕ್ರಮ ವಹಿಸಬೇಕು.
ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಹಾಯಕರಾಗಿ ಓರ್ವ ತಾಲ್ಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಎಲ್ಲಾ ಕಡೆಗೆ ನಿಯೋಜಿಸಲಾಗುವುದು. ಹಾಗೂ ಪ್ರತಿ 100 ಮೀ.ಗೆ ಒಬ್ಬರಂತೆ ಶಿಕ್ಷಕರು ಅಥವಾ ಸಿಬ್ಬಂದಿಯನ್ನು ಇನ್‌ಚಾರ್ಜ್ ಆಫೀಸರ್ ಎಂದು ನಿಯೋಜಿಸಲಾಗಿದ್ದು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.