ಕುಕನೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಲ್ಲಿ ಯಲಬುರ್ಗಾ ಕುಕನೂರು ತಾಲೂಕಿನಲ್ಲಿ ಹೊಸದಾಗಿ ಮತ್ತು ಉನ್ನತಿಕರಿಸಿದ 5 ಪ್ರೌಢಶಾಲೆ, 3 ಪದವಿ ಪೂರ್ವ ಕಾಲೇಜು ತೆರೆಯಲು ಯಲಬುರ್ಗಾ ಶಾಸಕ ರಾಯರಡ್ಡಿ ಅವರ ಪತ್ರಕ್ಕೆ ಮಂಡಳಿ ಒಪ್ಪಿಗೆ ಸೂಚಿಸಿದೆ.
ಈ ಕುರಿತಂತೆ ಕೆ ಕೆ ಆರ್ ಡಿ ಬಿ ಮಂಡಳಿ ಕಾರ್ಯದರ್ಶಿಗಳು ಕರ್ನಾಟಕ ಪ್ರೌಢ ಶಿಕ್ಷಣ, ಪದವಿ ಪೂರ್ವ ಶಶಿಕ್ಷಣ ಮಂಡಳಿಗೆ ಪತ್ರ ಬರೆದು ಪ್ರಸ್ತಾವಿತ ಯೋಜನೆಯ ಕಟ್ಟಡ ಕಾಮಗಾರಿ, ವೇತನ, ಪಿಠೋಪಕರಣ ಒಳಗೊಂಡ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿದೆ.
ಈ ಮೂಲಕ ಪ ಜಾತಿ, ಪ ಪಂಗಡ, ಹಿಂದುಳಿದ ವರ್ಗ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವ ಶಾಸಕರಾದ ಬಸವರಾಜ್ ರಾಯರಡ್ಡಿ ಅವರ ಪ್ರಯತ್ನವಾಗೀ ಯಲಬುರ್ಗಾ ಕುಕನೂರು ಅವಳಿ ತಾಲೂಕಿನಲ್ಲಿ ಈಗ ಮತ್ತೆ 5 ಪ್ರೌಢಶಾಲೆ, 3 ಪದವಿ ಪೂರ್ವ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗುತ್ತಿರುವುದು ವಿದ್ಯಾರ್ಥಿಗಳಿಗೆ ಸಂತಸ ಉಂಟುಮಾಡಿದೆ.
ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್, ಲಿಂಗನಬಂಡಿ, ಮುಧೋಳ್, ಮತ್ತು ಕುಕನೂರು ತಾಲೂಕಿನ ಯಡಿಯಾಪುರ, ಮಂಗಳೂರಿನಲ್ಲಿ ಒಟ್ಟು 5 ಪ್ರೌಢಶಾಲೆಗಳು, ಮತ್ತು ಯಲಬುರ್ಗಾ ತಾಲೂಕಿನ ಗುನ್ನಾಳ, ಕುಕನೂರು ತಾಲೂಕಿನ ಕುದರಿಮೋತಿ, ಮಸಬಹಂಚಿನಾಳ ಸೇರಿದಂತೆ ಒಟ್ಟು 3 ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿದ್ದು 2023-24 ಸಾಲಿನಿಂದಲೇ ಪ್ರಾರಂಭ ಮಾಡಲು ಮಂಡಳಿ ತಿಳಿಸಿದೆ.
ಅಲ್ಲದೇ ಮಂಡಳಿಯು ಕಟ್ಟಡ ನಿರ್ಮಾಣ ಕಾಮಗಾರಿ, ಮೂಲಭೂತ ಸೌಕರ್ಯ ಕಲ್ಪಿಸಲು 2023-24, 2024-25 ಅವಧಿಗೆ 16 ಕೋಟಿ ರೂ ಅನುದಾನ ಮೀಸಲು ಇರಿಸಿದೆ. ಜೊತೆಗೆ 2023-24 ನಿಂದ 3 ವರ್ಷಗಳ ವರೆಗೆ ಸಿಬಂದಿ ವೇತನಕ್ಕೆ ಸುಮಾರು 14 ಕೋಟಿ ರೂ ಅನುದಾನ ನೀಡುತ್ತಿದೆ.